ಜಿನಸೇನ 2-
ಆದಿಪುರಾಣ ಮತ್ತು ಪಾಶ್ರ್ವಾಭ್ಯುದಯಗಳ ಕರ್ತೃ. ಜೈನದರ್ಶನದ ಅನೇಕ ಮುಖಗಳನ್ನು ವಿಶದವಾಗಿ ವರ್ಣಿಸುವುದರಲ್ಲಿ ಈತ ನಿಪುಣನಾಗಿದ್ದು ಸಂಸ್ಕøತ ಭಾಷೆಯಲ್ಲಿ ತುಂಬ ಪ್ರೌಢಿಮೆಯನ್ನು ಸಂಪಾದಿಸಿ ತನ್ನ ಗ್ರಂಥಗಳ ಬಾಹುಳ್ಯ ಮತ್ತು ಶ್ರೇಷ್ಠಗುಣಗಳಿಂದ ಭಾರತೀಯ ಸಾಹಿತ್ಯದಲ್ಲಿ ಒಂದು ವಿಶಿಷ್ಟಸ್ಥಾನವನ್ನು ಗಳಿಸಿದ್ದಾನೆ. ಈತನ ಸ್ವಂತ ಜೀವನವನ್ನು ಕುರಿತು ನಮಗೆ ತಿಳಿದಿರುವ ಅಂಶಗಳು ತುಂಬ ಕಡಿಮೆ. ಆದರೂ ತನ್ನ ಜಯಧವಳದ ವಾಖ್ಯೆಯ ಕೊನೆಯಲ್ಲಿ ಈತ ಬರೆದಿರುವ ಹಲವು ಪದ್ಯಗಳಿಂದ ನಮಗೆ ಈತನ ವ್ಯಕ್ತಿತ್ವದ ಒಂದೆರಡು ನೋಟಗಳು ದೊರೆಯುತ್ತವೆ. ಹುಡುಗನಾಗಿದ್ದಾಗಲೇ ಈತ ವಿರಕ್ತ ಜೀವನಕ್ಕೊಲಿದು, ನಿಷ್ಠಬ್ರಹ್ಮಚಾರಿಯಾಗಿ ಧರ್ಮ ಮತ್ತು ವಿದ್ವತ್ತುಗಳಿಗೆ ತನ್ನ ಜೀವಿತವನ್ನು ಧಾರೆಯೆರೆದ. ಕಾಯದಲ್ಲಿ ದುರ್ಬಲನಾಗಿದ್ದರೂ ಅಷ್ಟು ರೂಪವಂತನಲ್ಲದಿದ್ದರೂ ತಪಸ್ಸಿನಲ್ಲಿ ಈತ ಬಲಿಷ್ಠನಾಗಿದ್ದುದಲ್ಲದೆ ಮೇಧೆ, ಸಹನೆ ಮತ್ತು ವಿನಯಗಳ ಸಿರಿಯನ್ನು ಪಡೆದಿದ್ದ. ಈತನೊಬ್ಬ ಜ್ಞಾನಮೂರ್ತಿ, ಆತ್ಮಸಂಪನ್ನ.

ಶ್ರಮಣನಾಗಿ ಈತ ತಾನೊಬ್ಬ ವ್ಯಕ್ತಿಮಾತ್ರ ಎನಿಸದೆ ಒಂದು ಸಂಸ್ಥೆಯೆನಿಸಿದ್ದ. ಶ್ರೇಷ್ಠ ಗುರುವಾದ ವೀರಸೇನನ ಶಿಷ್ಯನೀತ. ಗುರುವಿನ ಜಯಧವಳ ವ್ಯಾಖ್ಯಾನವನ್ನು ಈತ ಕ್ರಿ.ಶ. 837ರಲ್ಲಿ ಪೂರ್ತಿಮಾಡಿದ. ಇದೇ ರೀತಿಯಲ್ಲಿ ಈತನ ಕಾಲಾನಂತರ ಈತನ ಶಿಷ್ಯನಾದ ಗುಣಭದ್ರ ಕ್ರಿ.ಶ. 897ಕ್ಕೆ ಕೆಲವು ವರ್ಷಗಳ ಮುಂಚೆ ಈತನ ಮಹಾಪುರಾಣವನ್ನು ಪೂರ್ಣಗೊಳಿಸಿದ. ಜಿನಸೇನ ಪಂಚಸ್ತೂಪಾನ್ವಯವೆಂಬ ತಪಸ್ವಿಗಳ ಕುಲಕ್ಕೆ ಸೇರಿದವ. ಗುಹಾನಂದಿ, ವೃಷಭನಂದಿ, ಚಂದ್ರಸೇನ, ಆಯುರ್ನಂದಿ ಮತ್ತು ವೀರಸೇನರೂ ಈ ಕುಲದವರೇ. ಒಂದಾನೊಂದು ಕಾಲದಲ್ಲಿ ಭಾರತದ ಪೂರ್ವಭಾಗದ ಉತ್ತರ ದಿಕ್ಕಿನಲ್ಲಿ ಪಂಚಸ್ತೂಪಾನ್ವಯದವರು ನೆಲಸಿದ್ದರು; ಬಹುಶಃ ಈ ಅನ್ವಯದವರು ಶ್ರಮಣಕರ್ಮಸಿದ್ಧಾಂತ ಜ್ಞಾನಕ್ಕೆ ಅತ್ಯಂತ ಶ್ರೇಷ್ಠ ನಿಧಿಯಾಗಿದ್ದರೆಂದು ತೋರುತ್ತದೆ. ತಮ್ಮ ಈ ಕುಲಕ್ರಮಾಗತವಾದ ಕರ್ಮವಾದವನ್ನು ಧರಿಸಿಕೊಂಡು ತಮ್ಮ ಕಠಿಣ ತಪಶ್ಚರ್ಯವನ್ನು ಬಿಡದೆ ಇವರು ರಾಜಪುಟಾಣ, ಗುಜರಾತುಗಳ ಮೂಲಕ ಹಾಯ್ದು ದಕ್ಷಿಣದ ಶ್ರವಣಬೆಳೆಗೊಳದಷ್ಟು ದೂರಕ್ಕೂ ಹೋದರು. ವೀರಸೇನ, ಜಿನಸೇನರು ಎಂಥ ಪದವಿಯನ್ನೂ ಮಾಹತ್ಮ್ಯವನ್ನೂಗಳಿಸಿದರೆಂದರೆ, ಇವರ ಅನಂತರ ಇವರ ವಂಶಕ್ಕೆ ಅಥವಾ ಗುರುಪರಂಪರೆಗೆ ಪಂಚಸ್ತೂಪಾನ್ವಯ ಎಂಬ ಹೆಸರು ಇನ್ನೇನು ತಪ್ಪಿಯೇ ಹೋದಂತಾಗಿ ಅದಕ್ಕೆ ಸೇನಾನ್ವಯ ಅಥವಾ ಸೇನಗಣ ಎಂಬ ಹೆಸರು ಬರುವಂತಾಯಿತು.

ಜಿನಸೇನ ಜೀವಿಸಿದ್ದ ಕಾಲದಲ್ಲಿ ದೇಶದಲ್ಲಿ ಉತ್ತಮ ಆಡಳಿತವಿದ್ದು ಅದು ಸಂಪನ್ನವಾಗಿಯೂ ದೃಢವಾಗಿಯೂ ಪಾಂಡಿತ್ಯಪೋಷಕವಾಗಿಯೂ ಇತ್ತು, ಆ ಕಾಲದಲ್ಲಿ ಆಳುತ್ತಿದ್ದ ರಾಜರೆಂದರೆ ರಾಷ್ಟ್ರಕೂಟವಂಶದ ಜಗತ್ತುಂಗ ಮತ್ತು ನೃಪತುಂಗ ಅಥವಾ ಅಮೋಘವರ್ಷ (ಕ್ರಿ.ಶ. 815-877), ಆಗಿನ ರಾಜಧಾನಿ ವಿದ್ಯಾಕೇಂದ್ರವಾದ ಮಾನ್ಯಖೇಟ. ಅಮೋಘವರ್ಷ ಪ್ರಬಲನಾದ ದೊರೆಯಾಗಿದ್ದನಲ್ಲದೆ ಸಾಹಿತ್ಯಾಶ್ರಯನಾಗಿ ವಿದ್ವತ್‍ಪ್ರೇಮವುಳ್ಳವನೂ ಶ್ರೇಷ್ಠ ಸಾಹಿತಿಯೂ ಆಗಿದ್ದ.

ತನ್ನ ಗುರುಗಳಾದ ವೀರಸೇನ ಮತ್ತು ಜಯಸೇನರ ಬಳಿಯಲ್ಲೆ ವ್ಯಾಕರಣ, ಕಾವ್ಯ, ನ್ಯಾಯ ಮುಂತಾದ ಸಾಂಪ್ರದಾಯಿಕ ವಿದ್ಯಾಶಾಖೆಗಳಲ್ಲಿ ಶಿಕ್ಷಣವನ್ನು ಪೂರೈಸಿಕೊಂಡು, ಜಿನಸೇನ ತನ್ನ ಸಾಹಿತ್ಯಕೃಷಿಯನ್ನು (ಕ್ರಿ.ಶ. 783ಕ್ಕೆ ಸ್ವಲ್ಪ ಮುಂಚೆ) ಪಾಶ್ರ್ವಾಭ್ಯುದಯ ಎಂಬ ಸಂಸ್ಕøತ ಕಾವ್ಯದಿಂದ ಮೊದಲು ಮಾಡಿದನೆಂದು ತೋರುತ್ತದೆ. ಸಂಸ್ಕøತ ಸಾಹಿತ್ಯದಲ್ಲಿ ಇದೊಂದು ಕೌತುಕಾಸ್ಪದವಾದ ಗ್ರಂಥ. ಈ ಕಾವ್ಯದಲ್ಲಿ ಈತ ಪ್ರತಿಯೊಂದು ಪದ್ಯದಲ್ಲಿಯೂ ಕಾಳಿದಾಸನ ಮೇಘದೂತದ ಒಂದೆರಡು ಸಾಲುಗಳನ್ನು ಅನುಕ್ರಮವಾಗಿ ಅಳವಡಿಸಿಕೊಂಡು ಮಿಕ್ಕ ಸಾಲುಗಳನ್ನು ತಾನೆ ಪೂರ್ಣಗೊಳಿಸಿದ್ದಾನೆ. ಈ ರೀತಿಯಲ್ಲಿ ಕಾಳಿದಾಸನ ಇಡೀ ಕಾವ್ಯವೇ ಸಮಸ್ಯಾಪೂರಣವೆಂಬ ಕಾವ್ಯಕಲೆಗೆ ಒದಗಿಬಂದಿದೆ. ಕಥೆಗಳು ತೀರ ಭಿನ್ನವಾಗಿದ್ದರೂ ಪಾಶ್ರ್ವಾಭ್ಯುದಯದಲ್ಲಿ ಮೇಘದೂತದ ಸಾಲುಗಳು ತುಂಬ ಭಿನ್ನವಾಗಿದ್ದರೂ ಪಾಶ್ರ್ವಾಭ್ಯುದಯದಲ್ಲಿ ಮೇಘದೂತದ ಸಾಲುಗಳು ತುಂಬ ಚೆನ್ನಾಗಿ ಹುದುಗಿಸಲ್ವಟ್ಟಿವೆ. ಸಮಸ್ಯಾಪೂರ್ಣವೆಂಬ ಕಾವ್ಯಕಲೆ ಅದನ್ನು ಕೈಗೊಳ್ಳುವ ಕವಿಗೆ ಅನೇಕ ನಿರ್ಬಂಧಗಳನ್ನು ಹೊರಿಸುತ್ತದೆ. ಜಿನಸೇನ ಇದನ್ನು ಎಷ್ಟು ಸಹಜವಾಗಿ ಎಷ್ಟು ಕೌಶಲದಿಂದ ನಿರ್ವಹಿಸಿದ್ದಾನೆಂದರೆ, ಪಾಶ್ರ್ವಾಭ್ಯುದಯವನ್ನು ಓದುತ್ತಿದ್ದರೆ ಅದರಲ್ಲಿ ಬೇರೊಂದು ಸಂದರ್ಭದ ಬೇರೊಂದು ವಸ್ತುವಿಗೆ ಅನ್ವಯಿಸುವ ಮತ್ತೊಂದು ಪದ್ಯ ಅಡಗಿದೆ ಎಂಬ ಅಂಶ ನಮ್ಮ ಗೋಚರಕ್ಕೆ ಬರುವುದೇ ಇಲ್ಲ. ಜಿನಸೇನನಿಗೆ ಸಂಸ್ಕøತ ಭಾಷೆಯ ಮೇಲಿದ್ದ ಪ್ರಭುತ್ವಕ್ಕೂ ಕವಿತಾಸಾಮಥ್ರ್ಯಕ್ಕೂ ಇದೊಂದು ವಿಲಕ್ಷಣ ಸಾಕ್ಷಿಯಾಗಿದೆ. ಕಾಳಿದಾಸನ ಕಾವ್ಯಕ್ಕೆ ಈತನಲ್ಲಿ ಸಿಕ್ಕುವ ಮೆಚ್ಚುಗೆಯ ಮಾತುಗಳು ಈತನಿಗೆ ಭೂಷಣಪ್ರಾಯವಾಗಿದೆ. ಶೇಷ್ಠ ಕವಿಯೊಬ್ಬ ಮಾತ್ರ ಮತ್ತೊಬ್ಬ ಶ್ರೇಷ್ಠಕವಿಯನ್ನು ಮೆಚ್ಚಬಲ್ಲ. ಈ ಕಾವ್ಯವನ್ನು ಕುರಿತು ಪ್ರೊಫೆಸರ್ ಬಿ. ಪಾರಸ್ ಅವರು ಹೀಗೆಂದು ನುಡಿದಿದ್ದಾರೆ : ಸಂಸ್ಕøತ ಸಾಹಿತ್ಯದಲ್ಲಿನ ಕೌತುಕಗಳಲ್ಲಿ ಈ ಕಾವ್ಯ ಒಂದು. ಆ ಕಾಲದ ಸಾಹಿತ್ಯಾಭಿರುಚಿಯ ಫಲವಿದು ಮತ್ತು ಅದಕ್ಕೆ ಕನ್ನಡಿ ಹಿಡಿಯುತ್ತದೆ. ಎಲ್ಲರ ಸಮ್ಮತಿಯಿಂದಲೂ ಕಾಳಿದಾಸನಿಗೆ ಭಾರತೀಯ ಕವಿಪಂಕ್ತಿಯಲ್ಲಿ ಅಗ್ರಸ್ಥಾನ ದೊರೆತಿದೆ. ಆದರೆ ಜಿನಸೇನ ಮೇಘಸಂದೇಶದ ಕವಿಗಿಂತ ಹೆಚ್ಚಿನ ಪ್ರತಿಭಾಶಾಲಿ ಎಂಬ ಮನ್ನಣೆಗೆ ಪಾತ್ರನಾಗಲು ಯೋಗ್ಯನಿದ್ದಾನೆ.

ಷಟ್‍ಖಂಡಾಗಮಕ್ಕೆ ತನ್ನ 72 ಸಾವಿರ ಗ್ರಂಥಗಳ ಧವಳ ಎಂಬ ಭಾಷ್ಯವನ್ನು ಪೂರ್ತಿಮಾಡಿದ ಅನಂತರ, ವೀರಸೇನ ಕಾಷಾಯಪ್ರಾಭೃತದ ಮೇಲೆ ತನ್ನ ಜಯಧವಳ ಎಂಬ ವ್ಯಾಖ್ಯೆಯನ್ನು ಬರೆಯಲು ತೊಡಗಿದ. ಆತ ಇಪ್ಪತ್ತು ಸಾವಿರ ಗ್ರಂಥಗಳನ್ನು ಬರೆಯುವ ಹೊತ್ತಿಗೆ ತೀರಿಕೊಂಡ. ಸುಮಾರು ನಲವತ್ತುಸಾವಿರ ಗ್ರಂಥಾಗ್ರಗಳನ್ನು ರಚಿಸಿ ಆ ವ್ಯಾಖ್ಯಾನವನ್ನು ಪೂರ್ತಿಮಾಡುವ ಕೆಲಸ ಕ್ರಿ.ಶ. 837ರಲ್ಲಿ ಈ ಯೋಗ್ಯ ಶಿಷ್ಯ ಜಿನಸೇನ ಮೇಲೆ ಬಿದ್ದಿತು. ಈ ಮಹಾಭಾಷ್ಯಗಳು ಇವರ ಆಳವಾದ ಪಾಂಡಿತ್ಯವನ್ಯೂ ಜೈನ ದರ್ಶನದ ಸಕಲ ಶ್ರೇಣಿಯಲ್ಲೂ ಮುಖ್ಯವಾಗಿ ಕರ್ಮಸಿದ್ಧಾಂತದ ಮೇಲೆ ಇವರ ತಿಳಿವಳಿಕೆಯ ಪ್ರಭುತ್ವವನ್ನೂ ತೋರಿಸುತ್ತವೆ. ಈ ಸಂದರ್ಭದಲ್ಲಿ ತಿಳಿಯತಕ್ಕದೆಲ್ಲವೂ ಈ ಕೃತಿಗಳಲ್ಲಿ ಅಡಗಿದೆ ಮತ್ತು ಇದು ಸಂಸ್ಕøತ ಮತ್ತು ಪ್ರಾಕೃತ ವ್ಯಾಖ್ಯಾನಗಳನ್ನೆಲ್ಲ ವಸ್ತುತಃ ತನ್ನಲ್ಲಿ ಅಡಗಿಸಿಕೊಂಡಿದೆ. ಜಿನಸೇನನ ಕವಿತಾಸಾಮಥ್ರ್ಯವನ್ನು ಪಾಶ್ರ್ವಾಭ್ಯುದಯ ಬೆಳಗುವಂತೆ ಜಯಧವಳ ಆತನ ವಿಸ್ತಾರವಾದ ಜ್ಞಾನದ ಆಳವನ್ನು ತೋರಿಸುತ್ತದೆ. ಆತನ ಮಹಾಪುರಾಣದಲ್ಲಿ ಇವೆರಡು ಸಾಮಥ್ರ್ಯಗಳೂ ತುಂಬ ಚೆನ್ನಾಗಿ ಹೊಮ್ಮಿರುವುದು ಗೋಚರಿಸುತ್ತದೆ. 

ಮಹಾಪುರಾಣ ಅಥವಾ ತ್ರಿಷಷ್ಟಿಲಕ್ಷಣಮಹಾಪುರಾಣ ಸಂಗ್ರಹವೆಂಬ ಗ್ರಂಥ, ಅದರ ಹೆಸರೇ ಸೂಚಿಸುವಂತೆ, ಪುರಾತನ ಕಾಲದ ಕತೆಗಳನ್ನು ಹೇಳುತ್ತದೆ. ಮೂಲತಃ ಅದರಲ್ಲಿ ಜೈನಧರ್ಮದಲ್ಲಿ ಉಕ್ತರಾಗಿ ಪೂಜ್ಯರಾಗಿರುವ 63 ಶಲಾಕಾ ಪುರುಷರ ಜೀವನಚರಿತ್ರೆ ವರ್ಣಿತವಾಗಿದೆ. ಈ ಜೀವನಚರಿತ್ರೆಗಳಲ್ಲಿ ಅವರ ಒಂದೇ ಒಂದು ಜನ್ಮದ ವೃತ್ತಾಂತವಿರದೆ, ಅದರ ಜೊತೆಗೆ ಜನ್ಮಾನುಜನ್ಮಗಳಲ್ಲಿ ಅವರು ಪಡೆದ ಆತ್ಮಾನುಭೂತಿಗಳೆಲ್ಲವೂ ವಿವರವಾಗಿ ವರ್ಣಿತವಾಗಿದೆ ಮತ್ತು ಅವರ ಆತ್ಮ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಾರ್ಗದಲ್ಲಿ ಹೇಗೆ ಮುಂಬರಿಯಿತೆಂಬುದರ ಉಲ್ಲೇಖವೂ ಇದೆ. ವಾಸ್ತವವಾಗಿ ಧರ್ಮೋತ್ಸಾಹವುಳ್ಳವರೆಲ್ಲರ ಕಣ್ಣಿದಿರಿನಲ್ಲೂ ಈ ಜೀವನಚರಿತ್ರೆಗಳು ಅನೇಕ ಮಹಾತ್ಮರ ಆಧ್ಯಾತ್ಮಿಕ ಪ್ರವರ್ತನೆಯ ವಿವಿಧ ಮುಖಗಳನ್ನು ಕಡೆದಿಟ್ಟು ಧರ್ಮಶ್ರದ್ಧೆಯನ್ನು ಹೆಚ್ಚಿಸುವುದಲ್ಲದೆ ಆಧ್ಯಾತ್ಮಿಕಾದರ್ಶಗಳನ್ನೂ ನಿರ್ದಿಷ್ಟಗೊಳಿಸುತ್ತವೆ. ಈ ಕಥನವೆಲ್ಲವೂ ಶ್ರೇಣಿಕನ ಪ್ರಶ್ನೆಗೆ ಗೌತಮ ಕೂಡುವ ಉತ್ತರಗಳ ರೂಪದಲ್ಲಿದೆ. ಇವರಿಬ್ಬರೂ ಐತಿಹಾಸಿಕ ಪುರುಷರು. ಈ ಆತ್ಮಗಳ ಜೀವನಚರಿತ್ರೆ ಈ ಗ್ರಂಥಕರ್ತರಿಗೆ ಸಮಯ ಸಂಪ್ರದಾಯಗಳನ್ನು ಕುರಿತು ಅನೇಕ ವಿಷಯಗಳನ್ನು ಹೇಳುವುದಕ್ಕೂ ಪುರಾಣ, ಧರ್ಮ, ಮತತತ್ತ್ವ, ಮತೀಯ ಸಂಸ್ಕಾರ, ಮತೀಯ ವಿಧಿಗಳು ಇವೇ ಮೊದಲಾದುವುಗಳ ವಿವರಗಳನ್ನು ತಮ್ಮ ಕೃತಿಗಳಲ್ಲಿ ಸೇರಿಸುವುದಕ್ಕೂ ಅವಕಾಶವನ್ನು ಕಲ್ಪಿಸಿಕೊಟ್ಟ ಇಡಿಯಾಗಿ ಜೈನಧರ್ಮದ ವಿಶ್ವಕೋಶವೆನಿಸುವಂತೆ ರಚನೆಗೊಂಡಿದೆ. ಕಾಲಾನುಸಾರವಾಗಿ ಮಾನವ ಸಮಾಜ ಹೇಗೆ ವಿಕಾಸ ಹೊಂದುತ್ತ ಹೋಯಿತೆಂಬುದರ ವಿಶದವಾದ ನೋಟ ನಮಗಿಲ್ಲಿ ದೊರೆಯುತ್ತದೆಯಲ್ಲದೆ ಹಿಂದಿನ ಮಹಾಪುರುಷರು ಈ ಮೊದಲಲ್ಲಿ ಭಾವೀ ಜನಾಂಗಕ್ಕೆ ಏನೇನನ್ನು ಬಿಟ್ಟುಹೋದರು ಎಂಬುದು ಸಹ ಗೋಚರಕ್ಕೆ ಬರುತ್ತದೆ. ಜನ್ಮದಿಂದ ಜನ್ಮಾಂತರಕ್ಕೆ ಸಾಕಾಗುವ ಜೀವಾತ್ಮಗಳ ಸಮಗ್ರ ವಿಶ್ವದ ನೋಟಗಳನ್ನು ಅವುಗಳ ತಾತ್ತ್ವಿಕ ಸಂಬಂಧಗಳನ್ನೂ ಇವು ಕಣ್ಣಮುಂದೆ ತರುತ್ತವೆ. ಕವಿತಾವರ್ಣನೆಗಳು, ನೀತ್ಯುಪದೇಶಗಳು, ನೀತ್ಯನುಸರಣ ಪ್ರಚೋದನೆ, ಸ್ವಪ್ನಗಳನ್ನು ಕುರಿತ ತಾತ್ತ್ವಿಕ ವಿವರಣೆಗಳು, ಗ್ರಾಮನಕ್ಷೆ, ರಾಜನೀತಿ ಮುಂತಾದುವು ಧಾರ್ಮಿಕ ಮತತತ್ತ್ವಗಳು ಮತ್ತು ಆಚಾರಗಳು, ಪರಿಸಿದ್ಧಾಂತ ವಿಮರ್ಶಕ ವಿವರಗಳು, ತಾಂತ್ರಿಕ ವಿಷಯಗಳು-ಇಲ್ಲಿ ಅಡಕವಾಗಿವೆ. 

ಮಹಾಪುರಾಣ ಶ್ರಮಣಸಂಸ್ಕøತಿಯ ಮಹಾಪುರುಷರ ವಿಭವಯುಕ್ತವಾದ ಸಾಂಪ್ರದಾಯಿಕ ಇತಿಹಾಸವನ್ನು ಕುರಿತು ಹೇಳುವ ಗ್ರಂಥ. ನಾಭಿ ಮುಂತಾದ ಕುಲಕರರು, ವೃಷಭ ಮುಂತಾದ ತೀರ್ಥಂಕರರು, ಭರತ ಮುಂತಾದ ಚಕ್ರವರ್ತಿಗಳು-ಇವರ ಬಗ್ಗೆ ಮತ್ತು ಇತರ ಅನೇಕ ವಿಷಯಗಳ ಬಗ್ಗೆ ವಿಪುಲವಾದ ವಿವರಗಳನ್ನು ಘನವಾಗಿ ಇದು ನಿರೂಪಿಸುತ್ತದೆ. ಇಲ್ಲೇ ನಮಗೆ ರಾಮ-ರಾವಣ, ಕೃಷ್ಣ-ಪಾಂಡವರು, ಬಾಹುಬಲಿ-ಬ್ರಹ್ಮದತ್ತ, ಜೀವಂಧರ, ವಸು, ನಾರದ ಮತ್ತು ಇತರ ಮಹಾಜ್ಯೋತಿಗಳ ಕತೆಗಳು ದೊರೆಯುವುದು. ಈ ಕತೆಗಳು ಪುರಾಣವನ್ನು ತುಲನಾತ್ಮಕವಾಗಿ ವ್ಯಾಸಂಗಮಾಡುವವರಿಗೆ ಅತ್ಯಂತ ಆವಶ್ಯಕವೆನಿಸಿವೆ. 

ಭರತನ ದಿಗ್ವಿಜಯವನ್ನು ವರ್ಣಿಸುವಾಗ, ಗ್ರಂಥಕರ್ತ ಮುಖ್ಯ ಭೌಗೋಳಿಕ ವಿಷಯಗಳನ್ನು ನಿರೂಪಿಸುತ್ತಾನೆ. ಅನೇಕ ವಿವರಗಳಲ್ಲಿ ಇವು ಸಾಮಯಿಕವಾಗಿವೆ. ಕಲ್ಪವೃಕ್ಷಗಳು, ಸಂಖ್ಯೆಗಳು, ಮೂರು ಲೋಕಗಳು, ವಿವಿಧ ಪರ್ವತಗಳು, ದಾರ್ಶನಿಕ ಪಂಥಗಳು, ಜ್ಞಾನ ವಿಭಾಗಗಳು, ಸಂಸಾರತ್ಯಾಗ, ಮತಕರ್ಮಗಳು, ಸಂಸ್ಕಾರಗಳು, ವ್ರತಗಳು, ಧ್ಯಾನ, ಸಮವಸರಣ-ಇವುಗಳ ವರ್ಣನೆಗಳು ಅತಿ ಮುಖ್ಯವಾದ ಧಾರ್ಮಿಕ ಮತ್ತು ಸಾಂಸ್ಕøತಿಕ ವಿವರಗಳೊಡನೆ ಕೂಡಿಕೊಂಡು ಕೃತಿಯನ್ನು ಸಂಪನ್ನವಾಗಿ ಮಾಡಿದೆ. ಇಲ್ಲಿನ ಕೆಲವು ಸಮಾಜ-ಸಂಸ್ಕಾರ ವಿಷಯಗಳು ನಾವು ಎಚ್ಚರಿಕೆಯಿಂದ ಪರಾಮರ್ಶಿಸಲು ತಕ್ಕವಾಗಿವೆ. ಲೌಕಿಕರಿಗೂ ಶ್ರಮಣರಿಗೂ ಬೇಕಾದ ನೀತ್ಯನುಶಾಸನಗಳು ಈ ಕೃತಿಯುದ್ದಕ್ಕೂ ಹರಡಿವೆ; ಇವುಗಳಲ್ಲದೆ ರಾಜನೀತಿ ಮತ್ತು ಲೋಕನೀತಿಯ ಅನೇಕ ವಿಚಾರಗಳು ಮನಮುಟ್ಟುವಂತೆ ನಿರೂಪಿತವಾಗಿವೆ. 

	ಮಹಾಪುರಾಣವನ್ನು ರಚಿಸುವಾಗ, ಜಿನಸೇನ ಮತ್ತು ಗುಣಭದ್ರರು ಪರಂಪರಾಗತವಾಗಿ ಪವಿತ್ರಗ್ರಂಥಗಳಿಂದಲೂ ಅವುಗಳ ತರುವಾಯ ಬಂದ ಯತಿ ವೃಷಭನ ತಿಲೋಯಪಣ್ಣತ್ತಿ, ಮತ್ತು ಕವಿಪರಮೇಷ್ಠಿಯ ವಾಗರ್ಥ ಸಂಗ್ರಹ ಮೊದಲಾದ ಶಾಸ್ತ್ರಗ್ರಂಥಗಳಿಂದಲೂ ಅನೇಕ ವಿಚಾರಗಳನ್ನು ಎತ್ತಿಕೊಂಡಿದ್ದಾರೆ. ಇವರ ಈ ಕೃತಿ ಎಷ್ಟು ಪ್ರಾಮಾಣಿಕವೂ ವೈಭವಯುಕ್ತವೂ ಸಮಗ್ರವೂ ಆಗಿತ್ತೆಂದರೆ ಇದು ತನ್ನ ಹಿಂದಿನ ಗ್ರಂಥಗಳನ್ನೆಲ್ಲ ಹಿಂದಿಕ್ಕಿತು. ಆದುದರಿಂದ ಕವಿಮೇಷ್ಠಿಯಂಥವರ ಗ್ರಂಥಗಳು ಅನಾದೃತವಾಗಿ ಕಾಲಾನುಕಾಲದಲ್ಲಿ ನಷ್ಟವಾದುದರಲ್ಲಿ ಏನೂ ಆಶ್ಚರ್ಯವಿಲ್ಲ. 

	ಅಪಭ್ರಂಶ, ಸಂಸ್ಕøತ, ಕನ್ನಡ ಮತ್ತು ತಮಿಳುಗಳಲ್ಲಿ ತಮ್ಮ ಗ್ರಂಥಗಳನ್ನು ರಚಿಸಿದ ಪುಷ್ಪದಂತ, ಹೇಮಚಂದ್ರ, ಆಶಾಧರ, ಚಾಮುಂಡರಾಯ ಮುಂತಾದ ಲೇಖಕರಿಗೂ ತಮಿಳಿನಲ್ಲಿ ಶ್ರೀಪುರಾಣದ ಕರ್ತೃವೇ ಮೊದಲಾದವರಿಗೂ ಈ ಮಹಾಪುರಾಣ-ತಾನೊಂದೇ ಆಧಾರವೆನಿಸಿದಿದ್ದರೂ ನೇರವಾಗಲ್ಲದಿದ್ದರೂ ಒಂದು ಮಾದರಿ ಎನಿಸಿತು. ಜೊತೆಗೆ ಅನೇಕ ಜೈನ ಲೇಖಕರು ಒಬ್ಬ ತೀರ್ಥಂಕರ, ಒಬ್ಬ ಚಕ್ರವರ್ತಿ ಅಥವಾ ಬಾಹುಬಲಿ, ಪ್ರದ್ಯುಮ್ನ, ಜೀವಂಧರಂಥ ಧೀರೋದಾತ್ತ ಪುರುಷರು ಕತೆಯನ್ನು ಆರಿಸಿಕೊಂಡು ಕಾವ್ಯವನ್ನು ರಚಿಸುವಾಗ ತಮ್ಮ ಕಾವ್ಯದ ಶ್ರೀಮಂತಿಕೆಯನ್ನು ಹೆಚ್ಚಿಸುವ ವರ್ಣನೆ ಮತ್ತು ವಿವರಣೆಗಳ ನಮೂನೆಗಳಿಗೆ ನೇರವಾಗಿಯೋ ಇಲ್ಲ ಓರೆಯಾಗಿಯೋ ಈ ವರ್ಗದ ಕೃತಿಗಳಿಗೆ ಋಣಿಯಾಗಿದ್ದಾರೆ. 

ಮಹಾಪುರಾಣವನ್ನು ಎರಡು ಭಾಗಗಳಾಗಿ ವಿಂಗಡಿಸಿದ್ದಾರೆ : 47 ಪರ್ವಗಳನ್ನೊಳಗೊಂಡಿರುವ ಆದಿಪುರಾಣ ಮತ್ತು 29 ಪರ್ವಗಳ ಉತ್ತರಪುರಾಣ. ಆದುದರಿಂದ ಈ ಸಮಗ್ರ ಗ್ರಂಥದಲ್ಲಿ 76 ಪರ್ವಗಳಿವೆ. ಒಟ್ಟು ಗ್ರಂಥಾಗ್ರದಲ್ಲಿ ಸುಮಾರು 20,000 ಶ್ಲೋಕಗಳಿವೆ. ಆದಿಪುರಾಣದ ನಲವತ್ತೆರಡು ಪರ್ವಗಳು ಮತ್ತು ಮೇಲೆ ಮೂರು ಪದ್ಯಗಳನ್ನು (ಎಂದರೆ ಸುಮಾರು 12,000 ಶ್ಲೋಕಗಳನ್ನು) ಜೀನಸೇನನು ರಚಿಸಿದ. ಉಳಿದವನ್ನು ಆತನ ಶಿಷ್ಯ ಗುಣಭದ್ರ ರಚಿಸಿದ. ಆದಿಪುರಾಣದಲ್ಲಿ ಪ್ರಥಮ ತೀರ್ಥಂಕರ ಮತ್ತು ಪ್ರಥಮ ಚಕ್ರವರ್ತಿಯ ಚರಿತ್ರೆಯಿದೆ. ಉತ್ತರಪುರಾಣದಲ್ಲಿ ಇತರ ತೀರ್ಥಂಕರ ಮತ್ತು ಇತರ ತ್ರಿಷಷ್ಟಿಪುರುಷರ ಜೀವನ ಚರಿತ್ರೆ ನಿರೂಪಿತವಾಗಿದೆ. ಆದುದರಿಂದ ಉತ್ತರ ಪುರಾಣದಲ್ಲಿ (ಸುಮಾರು ಎಂಟು ಸಾವಿರ ಶ್ಲೋಕಗಳು) ವಿವರಣೆಗಿಂತ ಹೆಚ್ಚಾಗಿ ಇವರ ಗಣನೆ ಇರುವುದು ಗೋಚರಿಸುತ್ತದೆ. 

	ಜೈನಸಂಪ್ರದಾಯಗಳನ್ನು ಮತ್ತು ತತ್ತ್ವಗಳನ್ನು ಕ್ರಮಬದ್ಧವಾಗಿ ವಿವರಿಸುವ ಗ್ರಂಥ ಮಹಾಪುರಾಣವೆಂಬುದು ಆ ಜ್ಞಾನವುಳ್ಳವನಿಗೆ ಚೆನ್ನಾಗಿ ತೋರಿ ಬರುತ್ತದೆ. ಆದರೆ ಈ ಕೃತಿಯ ಸಾಹಿತ್ಯಮೌಲ್ಯಗಳ ವಿಷಯದಲ್ಲಿ ಸಂಸ್ಕøತ ಸಾಹಿತ್ಯದಲ್ಲಿ ವಿಶೇಷ ಪರಿಶ್ರಮವುಳ್ಳವರು ಎಷ್ಟು ಆಸಕ್ತಿಯನ್ನು ತಳೆಯಬೇಕೋ ಅಷ್ಟನ್ನು ತಳೆದಿಲ್ಲ. ಮಹಾಪುರಾಣದ ಅನೇಕ ಭಾಗಗಳಲ್ಲಿ ಅತ್ಯಂತ ಸುಂದರವಾದ ಕಾವ್ಯದ ನಮೂನೆಗಳಿವೆ. ಈ ಕ್ಷೇತ್ರದಲ್ಲಿರುವ ತನ್ನ ಹಿಂದಿನವರು ರಚಿಸಿದ ಕೃತಿಗಳ ಪರಿಚಯವನ್ನು ತುಂಬ ವಿಚಕ್ಷಣೆಯಿಂದ ಮಾಡಿಕೊಂಡಿದ್ದನೆಂಬುದನ್ನು ತನ್ನ ಈ ಕೃತಿಗಳಲ್ಲಿ ಜಿನಸೇನ ತೋರಿಸಿಕೊಡುತ್ತಾನೆ. ಈತ ಸಂಸ್ಕøತ ಭಾಷೆಯಲ್ಲಿ ಸರಾಗವಾಗಿಯೂ ಸುಲಭವಾಗಿಯೂ ಬರೆಯಲು ಕಲಿತಿದ್ದನಲ್ಲದೆ ಅದಕ್ಕೆ ಒಂದು ಗಾಂಭೀರ್ಯವನ್ನು ಕೊಡಬಲ್ಲವನಾಗಿದ್ದ. ಸಂಸ್ಕøತ ಭಾಷೆ, ವ್ಯಾಕರಣ ಮತ್ತು ಶಬ್ದಕೋಶದ ಬಲ ದೌರ್ಬಲ್ಯಗಳನ್ನು ಸಮಗ್ರವಾಗಿ ಬಳಸಿಕೊಂಡಿರುವ ಬಗೆಯನ್ನು ಈತನ ಸಹಸ್ರನಾಮ ಎಂಬ ಕೃತಿ ತೋರಿಸುತ್ತದೆ. ಪದ್ಯ ರಚನೆಯಲ್ಲಿ ಈತ ನಿಪುಣ, ಮತ್ತು ಆಗಾಗ ಅಲಂಕಾರ ಮತ್ತು ಛಂದಸ್ಸುಗಳಲ್ಲಿ ಚಮತ್ಕಾರಗಳನ್ನು ಪ್ರದರ್ಶಿಸುವುದಕ್ಕೂ ಮನಗೊಟ್ಟಿದ್ದಾನೆ. ಈತನ ವರ್ಣನೆಗಳು ತುಂಬ ಹುಲುಸಾಗಿವೆಯಲ್ಲದೆ ಶಬ್ದಾರ್ಥಾಲಂಕಾರಗಳಿಂದ ಕೂಡಿ ಶೋಭಿಸುತ್ತವೆ. ಜಿನಸೇನ ಈ ಕೃತಿಯನ್ನು ಪೂರ್ಣಗೊಳಿಸಲಿಲ್ಲವೆಂಬ ಸಂಗತಿ ಸಂಸ್ಕøತವಾಙ್ಮಯದಲ್ಲಿ ಒಂದು ವಿಷಾದನೀಯವಾದ ಘಟನೆ. ಆತನ ಶಿಷ್ಯ ಗುಣಭದ್ರ ತುಂಬ ಹಿಂದು ಮುಂದು ನೋಡಿ, ಕೆಲಕಾಲ ಸುಮ್ಮನಿದ್ದು, ಆದರೆ ತನ್ನ ಗುರುವಿಗೆ ತಾನು ಸಲ್ಲಿಸಬೇಕಾದ ಒಂದು ಪವಿತ್ರ ಕಾಣಿಕೆಯಿದು ಎಂಬ ಮನೋಭಾವದಿಂದ ಇದನ್ನು ಪೂರ್ತಿಮಾಡಬೇಕಾಯಿತು. ಆ ಬಳಿಕ ಕ್ರಿ.ಶ. 897ರಲ್ಲಿ ಗುಣಭದ್ರನ ಶಿಷ್ಯರಲ್ಲೊಬ್ಬನಾದ ಲೋಕಸೇನ ಇದನ್ನು ಒಂದು ಪವಿತ್ರಗ್ರಂಥವಾಗಿ ಪ್ರತಿಷ್ಠಾಪಿಸಿದ. ಒಬ್ಬ ವ್ಯಕ್ತಿಯ ಜೀವಿತಾವಧಿಯಲ್ಲಿ ಮುಗಿಲಾದಷ್ಟು ಘನವುಳ್ಳದ್ದೂ ಆದ ಭಾರತೀಯ ಸಾಹಿತ್ಯದ ಈ ಮೂರು ಮಹಾಗ್ರಂಥಗಳನ್ನು ಎಂದರೆ ಧವಳ, ಜಯಧವಳ ಮತ್ತು ಮಹಾಪುರಾಣಗಳನ್ನು ರಚಿಸುವುದಕ್ಕಾಗಿಯೇ ವೀರಸೇನ, ಜಿನಸೇನ ಮತ್ತು ಗುಣಭದ್ರರು ತಾವು ಏಕಾತ್ಮವನ್ನು ತಳೆದ ಮೂರು ಶರೀರಗಳೆಂಬಂತೆ ಜನ್ಮ ತಾಳಿದುದು ಚಿರಸ್ಮರಣೀಯವಾದ ಪ್ರಸಂಗವೇ ಸರಿ.			(ಎ.ಎನ್.ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ